Saturday 12 January 2013

ಕೃಷಿಗೂ ಬಂತು ವಲಸೆಯ ಖುಷಿ

ಅಡಿಕೆ ತೋಟದಲ್ಲಿ ವಲಸೆ ಕಾರ್ಮಿಕರು 
ಹಿಂದೆ ಕಾಂಕ್ರೀಟ್ ಹಾಕಲು, ಡಾಂಬರು ಹಾಕಲು ರಸ್ತೆ ಕಾಮಗಾರಿಗೆ ಜನರು ಘಟ್ಟ ಪ್ರದೇಶದಿಂದ ವಲಸೆ ಬರುತ್ತಿದ್ದರು. ಆದರೆ ಈಗ ಅಲ್ಲಿಯ ಜನರು ಬಯಲು ಸೀಮೆಯ ಹೆಕ್ಟರ್ಗಟ್ಟಲೆ ಕೃಷಿಯ ಜೊತೆಗೆ ಕರಾವಳಿಯ ಸೆಂಟ್ಸ್ಗಟ್ಟಲೆ ಜಾಗದ ಕೃಷಿಯೆಡೆಗೆ ಕಣ್ಣ ಹಾಯಿಸಿದ್ದಾರೆ. ದೂರದೂರಿಂದ ಬಂದು ಕರಾವಳಿ ಮಣ್ಣಲ್ಲಿ ಬೆವರು ಹರಿಸಿ ಇಲ್ಲಿಯ ಅಡಿಕೆ ಕೃಷಿಗೆ ಜೀವ ತುಂಬುತ್ತಿದ್ದಾರೆ.
ಅದು ಕೆಲ ವರ್ಷಗಳ ಹಿಂದಿನ ದೃಶ್ಯ, ಎಲ್ಲಿ ನೋಡಿದರಲ್ಲಿ ಬುಟ್ಟಿ, ಪಿಕ್ಕಾಸು ಹಿಡಿದುಕೊಂಡು ಜನರು ತೋಟಗಾರಿಕೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕರಾವಳಿಯಾದ್ಯಂತ ಅಡಿಕಡ ಕೃಷಿ ಭರದಿಂದ ಸಾಗುತ್ತಿತ್ತು. ಅಡಿಕೆ ತೋಟಕ್ಕೆ ಮಣ್ಣು ಹಾಕಲು, ಗೊಬ್ಬರ ಹಾಕಲು ಹೀಗೆ ಎಲ್ಲಾ ಕೆಲಸಕ್ಕೂ ಕೆಲಸಗಾರರು ಯಥೇಚ್ಛವಾಗಿ ಸಿಗುತ್ತಿದ್ದರು. ಕರಾವಳಿಯ ಕೃಷಿಕರಿಗೆ, ಕೃಷಿ ಕಾರ್ಮಿಕರಿಗೆ ಅಡಿಕೆ ತೋಟಗಾರಿಕೆ ಜೀವಾಳವಾಗಿತ್ತು. ಆದರೆ ಈಗಿನ ವಾಸ್ತವ ಪರಿಸ್ಥಿತಿ ತೀರ ವ್ಯತಿರಿಕ್ತವಾಗಿದೆ. ಬೆವರು ಹರಿಸಿ ಡುಡಿಯುವುದಕ್ಕೆ ಜನರು ಒಲ್ಲೆ ಎನ್ನುತ್ತಿದ್ದಾರೆ. ಅಡಿಕೆ ಕೃಷಿಗೂ ವಲಸೆಯ ಬಣ್ಣ ಲೇಪಿದೆ.
ದಾವಣಗೆರೆ, ಶಿವಮೊಗ್ಗ, ಬೆಳಗಾವಿ ಹೀಗೆ ಬಯಲು ಸೀಮೆಯ ಬಿಸಿಲು ನಾಡಿನ ಜನರು ಕರಾವಳಿಯೆಡೆಗೆ ತಂಡೋಪತಂಡವಾಗಿ ವಲಸೆ ಬರುತ್ತಿದ್ದಾರೆ. ಇಲ್ಲಿಯ ಅಡಿಕೆ, ರಬ್ಬರ್ ಕೃಷಿ ಕೆಲಸಗಳನ್ನು ಕಾಂಟ್ರ್ಯಾಕ್ಟ್ ವಹಿಸಿಕೊಳ್ಳುತ್ತಿದ್ದಾರೆ.  ಕಂಗು ತೆಂಗುಗಳ ಬುಡ ಬಿಡಿಸುವುದು, ಮಣ್ಣು ಹಾಕುವುದು, ಗೊಬ್ಬರ ಹಾಕುವುದು, ಸಸಿ ನೆಡುವುದು ಹೀಗೆ ತೋಟಗಾರಿಕೆಯ ಪ್ರತಿಯೊಂದು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಒಂದೊಂದು ತಂಡದಲ್ಲೂ ಸುಮಾರು 40 ರಿಂದ 50 ಮಂದಿ ಇರುತ್ತಾರೆ. ಅದಕ್ಕೊಬ್ಬ ಮೇಸ್ತ್ರಿ [ಮುಖ್ಯಸ್ಥ] ಇರುತ್ತಾರೆ. ವಿವಿಧೆಡೆ ಏಕಕಾಲಕ್ಕೆ ಕೆಲಸವನ್ನು ವಹಿಸಿಕೊಂಡು ತಂಡವನ್ನು ಗುಂಪಗಳನ್ನಾಗಿ ವಿಂಗಡಿಸಿ ಆಯಾಯ ಕೆಲಸಗಳನ್ನು ನಿರ್ವಹಿಸಲು ವಿವಿಧೆಡೆಗೆ ಕಳಿಸಿಕೊಡುವ ಜವಾಬ್ದಾರಿ ಮೇಸ್ತ್ರಿಯದ್ದು. ಕಂಗು ಲೆಕ್ಕ, ಜಾಗದ ವಿಸ್ತೀರ್ಣಕ್ಕೆ ಹೊಂದುಕೊಂಡು ಜನರನ್ನು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಎಕ್ಕರೆಗಟ್ಟಲೆ ಜಾಗವಿದ್ದಲ್ಲಿ ಅಲ್ಲಿಗೆ ಜಾಸ್ತಿ ಕೆಲಸಗಾರರನ್ನು ಹೊಂದಿಸಿ ಸಣ್ಣ ಸೆಂಟ್ಸ್ ತೋಟದ ಕೆಲಸಗಳಿಗೆ, ಕೆಲಸಕ್ಕೆ ಹೊಂದುವಂತೆ ಕೆಲಸಗಾರರ ಗುಂಪುಗಳನ್ನು ತಯಾರಿಸುತ್ತಾರೆ.
ನಾನು ದಾವಣಗೆರೆಯವನು ಸುಮಾರು 6-7 ವರ್ಷಗಳಿಂದ ಕರಾವಳಿಯಲ್ಲಿ ಕೃಷಿ ಕೆಲಸಗಳನ್ನು ಮಾಡುತ್ತಿದ್ದೇನೆ. ನಮ್ಮದು 50 ಜನರ ತಂಡವಾಗಿದೆ. ಕೆಲಸಗಳನ್ನು ಕಾಂಟ್ರ್ಯಾಕ್ಟ್ ವಹಿಸಿಕೊಂಡು ಸಂಬಳ ಮಾತನಾಡಿ ನಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವ ಜವಾಬ್ದಾರಿ ನನ್ನದು. ನಾವು ಹಣವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ. ಹಣ ಹಂಚಿಕೆಯ ವಿಚಾರದಲ್ಲಿ ಲಿಂಗ ತಾರತಮ್ಯ ಮಾಡುವುದಿಲ್ಲ. ಕಾಯಕವೇ ನಮ್ಮ ದೇವರು. ಎನ್ನುತ್ತಾರೆ ತಂಡದ ಮೇಸ್ತ್ರಿ ಆರ್ ಟಿ ಪಾಪಣ್ಣ.
ಮುಂಜಾನೆ ಎಳು ಗಂಟೆಯಿಂದ ಸಂಜೆ 4.00ರ ವರೆಗೆ ಅವರ ಕೆಲಸದ ಸಮಯ. ಮಧ್ಯಾಹ್ನದ ಊಟದ ಬಿಡುವೆಂದು ಕಾಲು-ಅರ್ಧ ಗಂಟೆಯಷ್ಟು ವಿರಾಮ ಬಿಟ್ಟರೆ ಅವರದು ನಿರಂತರ ಕೆಲಸ. ಕೆಲಸವನ್ನು ಕಾಂಟ್ರ್ಯಾಕ್ಟ್ ವಹಿಸಿಕೊಳ್ಳುವುದರಿಂದ ಊಟ ತಿಂಡು ಎಲ್ಲವನ್ನೂ ಅವರೇ ತಯಾರಿಸಿ ಕೊಳ್ಳುತ್ತಾರೆ. ವಾಸಕ್ಕೆ ಅವರದೇ ಟೆಂಟ್ ಕಟ್ಟಿಕೊಳ್ಳುತ್ತಾರೆ. ಕೆಲಸದ ವಿಚಾರದಲ್ಲಿ 'ಆಳಿದ್ದ ಮನೆಯಲ್ಲಿ ದೂಳಿಲ್ಲ' ಎಂಬಂತೆ ಅಷ್ಟೊಂದು ನಿಷ್ಠೆಯಿಂದ ನಿರ್ವಹಿಸುತ್ತಾರೆ.
ಇಲ್ಲಿ ಕೆಲಸಕ್ಕೆ ಜನ ಸಿಗುವುದಿಲ್ಲ ಹಾಗಾಗಿ ಘಟ್ಟದಿಂದ ಜನರನ್ನು ಕರೆಸಿ ಕೆಲಸ ಮಾಡಿಸುವ ಪರಿಸ್ಥಿತಿ ಒದಗಿದೆ. ಅವರ ಕೆಲಸವನ್ನು ನಾವು ಮೆಚ್ಚಲೇ ಬೇಕು. ಕಾಂಟ್ರ್ಯಾಕ್ಟ್ ಕೆಲಸಕ್ಕೆ ನೀಡುವ ಹಣಕ್ಕೇನು ಮೋಸವಾಗದ ಹಾಗೆ ಕೆಲಸ ನಿರ್ವಹಿಸುತ್ತಾರೆ. ಅವರ ಶ್ರಮ, ಕೆಲಸದ ವೈಖರಿ ಕಂಡಾಗ ಇನ್ನೂ ನೂರು ರುಪಾಯಿ ಹೆಚ್ಚು ಕೊಡುವ ಅನಿಸುತ್ತದೆ. ಅಷ್ಟು ವೇಗ ಮತ್ತು ನಿಷ್ಠೆಯ ಕೆಲಸ ಅವರದು ಎನ್ನುತ್ತಾರೆ ಮಾಲಾಡಿಯ ತೆಂಗು ಕೃಷಿಕ ರಾಘವೇಂದ್ರ.
ಕರಾವಳಿಯಾದ್ಯಂತ ಇಂತಹ ಅನೇಕ ಬಯಲು ಸೀಮೆಯ ತಂಡಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿಯ ಕೃಷಿಗೆ ಬಯಲು ಸೀಮೆಯ ಕಂಪು ಹರಡಿದೆ. ಆರ್ ಟಿ ಪಾಪಣ್ಣ ರನ್ನು. ಸಂಪರ್ಕಿಸಿ 9945903260

-ಚಂದ್ರಶೇಖರ್ ಎಸ್ ಅಂತರ

1 comments:

ಬೆಳಿಯುತ್ತಿರುವ ಮಾಧ್ಯಮಗಳು ಎಷ್ಟು ಪೂರಕ ಎಂದು ಮೊನ್ನೆ ಬರಹವೊಂದನ್ನು ಬರೆದಿದ್ದಕ್ಕೆ ಬಿಜಾಪೂರದಿಂದ ಒಬ್ಬ ಹೇಳಿದ್ದ ಸರ್ ನೀವು ಕೂಲಿ ಕಾರ್ಮಿಕರ ಬಗ್ಗೆ ಕನಿಕರ ಬರೆಯಿರಿ ಅಂದ್ದದ್ದರು ಅದರಲ್ಲಿ ನಾನು ಟಿವಿ ಪೇಪರ ೋದುವ ಸಾಮಾನ್ಯ ಮನುಷ್ಯನ ಸ್ಥಿಸಿಗತಿ ಕುರಿತು ಬರೆದ್ದಿದ್ದೆ ಈಗ ತಾವು ಕುಲಿಕಾರ್ಮಿಕರ ಬಗ್ಗೆ ಬರೆದ ಈ ಲೇಖನ ತುಂಬಾ ಪರಿಣಾಮಕಾರಿಯಾಗಿದೆ ಉತ್ತಮ ಬರಹವಾಗಿದೆ ಅವರಿಗೊಂದು ನೆಲೆ ಕೊಡುವುದು ನಮ್ಮೆಲ್ಲರ ಕರ್ತವ್ಯ

Post a Comment

Share The Posts

Twitter Delicious Facebook Digg Stumbleupon Favorites More