Tuesday 22 January 2013

ಮಾಯಾ ಲೋಕದ ಕಿನ್ನರಿ


ಅದೊಂದು ಜಾದೂ ಪ್ರದರ್ಶನದ ವೇದಿಕೆ. ಮಹಿಳೆಯೊಬ್ಬರು ನಗು ಬೀರುತ್ತಾ ಕಪ್ಪು ಮ್ಯಾಜಿಕ್ ಟೋಪಿ ಹೂಗುಚ್ಛ ಹಿಡಿದುಕೊಂಡು ತೆರೆ ಮೇಲೆ ಬಂದರು. ಹೂವುಗಳನ್ನು ಆಘ್ರಾಣಿಸಿ ದುರ್ವಾಸನೆ ಬೀರುತ್ತಿದೆ ಎಂದು ಗುಚ್ಛದಲ್ಲಿದ್ದ ಹೂವುಗಳನ್ನೆಲ್ಲಾ ಕಿತ್ತು ತಾನು ತಂದಿದ್ದ ಜಾದು ಬಟ್ಟೆಯಲ್ಲಿ ಬರಿದಾದ ಗುಚ್ಛವನ್ನು ಮುಚ್ಚಿಟ್ಟರು. ಮಂತ್ರ ಪಠಿಸಿ ಜಾದೂ ಬಟ್ಟೆ ಸರಿಸಿದಾಗ ಸುಗಂಧ ಪರಿಮಳ ಬೀರುವ ಬಣ್ಣ ಬಣ್ಣದ ಹೂವುಗಳು ಪ್ರತ್ಯಕ್ಷವಾದವು. ಹೀಗೆ ಸುಮಾರು ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಮಾಯಾಲೋಕಕ್ಕೆ ಕೊಂಡೊಯ್ದು ಸಭೀಕರ ಕಣ್ಣಿಗೆ ಕಟ್ಟುವಂತೆ ಲೀಲಾಜಾಲವಾಗಿ ಜಾದೂ ಪ್ರದರ್ಶಿಸಿದರು.
ತನ್ನ ಜಾದೂ ತಂತ್ರಾರಿಕೆಯಿಂದ ಎಲ್ಲರನ್ನೂ ಸಂಮೋಹನಗೊಳಿಸಿ, ಮಾಯಾ ಲೋಕದ ಬಲೆ ಬೀಸಿದವರು ಜಾದೂ ಪ್ರವೀಣೆ ಉಜಿರೆಯ ರಕ್ಷಾ ನಾಯಕ್.
ಸಣ್ಣ ವಯಸ್ಸಿನಲ್ಲೇ ಜಾದೂ ಪ್ರದರ್ಶನಗಳನ್ನು ನೋಡಿ, ಅದರ ತಂತ್ರಗಾರಿಕೆ ಕಲೆಗೆ ಮನಸೋತು ತಾನೂ ಜಾದೂಗಾರ್ತಿಯಾಗಬೇಕೆಂದು ಕನಸು ಕಂಡರು. ಜಾದೂ ಕುರಿತಾದ ಪುಸ್ತಕಗಳನ್ನು ಓದಿ ತಾನ್ನ 11ನೇ ವಯಸ್ಸಿನಲ್ಲೇ ಅಂಜಿಕೆ ಪಡದೆ ವೇದಿಕೆ ಏರಿ ಜಾದೂಗಳನ್ನು ಪ್ರದರ್ಶಿಸಿದರು. ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡವರು ರಕ್ಷಾ ನಾಯಕ್.
ಐದನೇ ತರಗತಿಯ ರಜೆಯಲ್ಲಿ ಕೇರಳದಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗಿದ್ದೆ. ಅಲ್ಲಿಯ ಜಾದೂ ಪ್ರದರ್ಶನ ಕಂಡು ಜಾದೂ ಪ್ರವೀಣೆಯಾಗಬೇಕೆಂದು ಪಣತೊಟ್ಟೆ. ನನ್ನ ಆಸೆ ಅರಿತ ಚಿಕ್ಕಪ್ಪ ಕೆಲ ಜಾದೂ ಪರಿಕರಗಳನ್ನು ತಂದು ಕೊಟ್ಟರು. 6ನೇ ತರಗತಿಯಲ್ಲಿರುವಾಗ ಕುದ್ರೋಳಿ ಗಣೇಶ್ ರ ಮೂರು ದಿವಸದ ಜಾದೂ ಕಲಿಕೆಯ ಶಿಬಿರಕ್ಕೆ ತೆರಳಿ ಸಕಷ್ಟು ಕಲಿತೆ. ನಂತರ ಬೆಳ್ತಂಗಡಿ ಉಜಿರೆ ಧರ್ಮಸ್ಥಳ ಆಸು ಪಾಸು ಗಣೇಶೋತ್ಸವ, ಲಕ್ಷಾದೀಪೋತ್ಸವ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜಾದು ಮಾಡಲು ಪ್ರಾರಂಭಿಸಿದೆ ಎಂದು ತನ್ನ ಮಾಯಾ ಲೋಕದ ಪಯಣದ ಕುರಿತು ನೆನಪಿಸಿಕೊಳ್ಳುತ್ತಾರೆ ರಕ್ಷಾ.
ರಕ್ಷಾ ಸ್ವಆಸಕ್ತಿ ಪರಿಶ್ರಮದಿಂದ ಜಾದು ವಿದ್ಯೆ ಕಲಿತರು. ಮೊದಮೊದಲು ವೇದಿಕೆಗಳಲ್ಲಿ 15 ನಿಮಿಷಗಳ ಪ್ರದರ್ಶನ ನೀಡುತ್ತಿದ್ದ ಅವರು ಈಗ 2 ಗಂಟೆಗಳ ಹೊತ್ತು ಲೀಲಾಜಾಲವಾಗಿ ಮಾಯಾಲೋಕದಲ್ಲಿ ವೀಕ್ಷಕರನ್ನು ತೇಲಿಸುವಷ್ಟು ಕೌಶಲ್ಯ ಹೊಂದಿದ್ದಾರೆ. ಸುಮಾರು ನೂರು ವೇದಿಕೆಗಳಲ್ಲಿ ಅವರ ಇಂದ್ರಜಾಲ ಕಸರತ್ತುಗಳು ಪ್ರದರ್ಶನವಾಗಿದೆ. ಅವರ ಜಾದು ಪಯಣಕ್ಕೆ 15 ವರ್ಷಗಳು ತುಂಬಿವೆ.
ವಿದ್ಯಾರ್ಥಿ  ದೆಸೆಯಲ್ಲಿ ಓದಿನಲ್ಲೂ ಮುಂದಿದ್ದ ರಕ್ಷಾ ನಾಯಕ್ ಉಜಿರೆ ಎಸ್. ಡಿ.ಎಂ ಕಾಲೇಜಿನಲ್ಲಿ ಬಿ.ಎ.ಸ್ಸಿ. ಪದವಿ ವ್ಯಾಸಂಗ ಮಾಡುತ್ತಿದ್ದಾಗ ವಿಜ್ಞಾನದ ವಿಷಯದಡಿ ತಾನು ರೂಪಿಸಿದ ಒಂದು ಯೋಜನೆಗೆ (2006)ಯುವ ವಿಜ್ಞಾನಿ ಎಂಬ ಬಿರುದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ನೀಡಿತ್ತು.
ನನ್ನ ಸಾಧನೆಗೆ ತಂದೆ-ತಾಯಿ ರತ್ನಾಕರ ಪ್ರಭು ಮತ್ತು ರೇಖಾ ಪ್ರಭುರ ಪ್ರೋತ್ಸಾಹ ಕಾರಣ. ಜಾದೂ ಲೋಕದ ಯಶಸ್ಸಿಗೆ ಕುದ್ರೋಳಿ ಗಣೇಶ್ ಸ್ಪೂರ್ತಿ  ಎನ್ನುತ್ತಾರೆ. ಪ್ರಸ್ತುತ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ರಕ್ಷಾ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ. 3 ವರುಷದ ಹೆಣ್ಣು ಮಗುವಿನ ಅಮ್ಮನಾಗಿ ಜಾದೂ ಲೋಕದ ನಂಟನ್ನು ಕಳೆದುಕೊಳ್ಳಲು ಇಷ್ಟವಿಲ್ಲದೆ ಜಾದೂ ವೃತ್ತಿಯನ್ನು ಮುಂದುವರಿಸಿದ್ದಾರೆ. ಗಂಡನ ಬೆಂಬಲವೂ ಅವರಿಗಿದೆ. ಬಿಡುವಿನಲ್ಲಿ ಮಂಗಳೂರು ಉಜಿರೆ ಧರ್ಮಸ್ಥಳ ಸುತ್ತಮತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಜಾದೂ ಪ್ರದರ್ಶನಗಳನ್ನು ರಕ್ಷಾ ನೀಡುತ್ತಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಮಹಿಳೆಯರು ಜಾದೂ ವೃತ್ತಿಯನ್ನು ಕೈಬಿಡುತ್ತಾರೆ.. ಕರ್ನಾಟಕದಲ್ಲಿ ಕೇವಲ ಆರು ಮಹಿಳೆಯರು ಮಾತ್ರ ಮದುವೆಯ ಬಳಿಕವೂ ಜಾದು ಹವ್ಯಾಸ ಮುಂದುವರಿಸಿದ್ದಾರೆ. ಜಾದೂಗಾರರಾಗಲು ಬಯಸುವ ಮಹಿಳೆಯರಿಗೆ ಅವರ ಕೌಶಲ್ಯ ಕ್ರಿಯಾಶೀಲತೆಯನ್ನು ವಿಕಸನಗೊಳಿಸಲು ಸೂಕ್ತ ವೇದಿಕೆ ಲಭಿಸಬೇಕಿದೆ ಜಾದೂ ಕಲಿಯುವ ಆಸಕ್ತಿ ಇರುವ ಮಹಿಳೆಯರಿಗೆ ಮನೆಯಲ್ಲಿ ಜಾದೂ ಕಲಿಸುತ್ತಿದ್ದೇನೆ ಎನ್ನುತ್ತಾರೆ ರಕ್ಷಾ. ದೂರವಾಣಿ ಸಂಖ್ಯೆ. 99*5**82*4         - ಚಂದ್ರಶೇಖರ್ ಎಸ್ ಅಂತರ.

2 comments:

ಈ ವಿಧ್ಯೆ ಎಲ್ಲರಿಗೂ ಬರಲ್ಲಾ ಆದರೆ ಕಲುತರೆ ತುಂಬಾ ಈಜಿ ಅಲ್ಲವಾ? ಇನ್ನು ಇದು ಸಾಮಾಜಿಕ ಕೆಲವು ಮೂಡನಂಬಿಕೆಗಳನ್ನು ಹೊಡಿದೂಡಿಸಲು ಕೂಡಾ ಸಾಹಾಯವಾಗಿದೆ.

Nijakku idondu uttamavada baraha

Post a Comment

Share The Posts

Twitter Delicious Facebook Digg Stumbleupon Favorites More