Monday 7 January 2013

ಜಾತ್ರೆಯ ಜಂಗುಳಿಯೊಳಗೆ.....!

ಸಾಲುಗಟ್ಟಲೆ ವೈವಿದ್ಯತೆಯ ಅಂಗಡಿ ಮುಂಗಟ್ಟುಗಳು, ಜನರ ನೂಕುನುಗ್ಗಲು ಥರ ಥರದ ವೇಷಭೂಷಣಗಳು ಗೌಜಿಗದ್ದಲ ಇವೆಲ್ಲ ಕಾಣಸಿಗುವುದು ಕರಾವಳಿಯ ಜಾತ್ರೆಗಳ ಸಂತೆಗಳಲ್ಲಿ... ಹೌದು ಇದು ಸಂತೆ ಜಾತ್ರೆಗಳ ಸಮಯ. ಜನಜಂಗುಳಿಯ ಮೇಳ. ಮೈಕ್ ಬ್ಯಾಂಡ್ ಸೆಟ್, ಚೆಂಡೆ, ವಾದ್ಯಗಳ ನಾದದ ಕಲರವ, ತುಳು ನಾಡ ಸಂಸ್ಕೃತಿ ಬಿಂಬಿಸುವ ಜಾತ್ರ್ಯೋತ್ಸವದ ಪರ್ವ ಕಾಲ.
ನಾಗರಪಂಚಮಿಯಂದು ಕವಲೊಡೆದು ದಸರಾ ಸಂದರ್ಭದಲ್ಲಿ ಚಿಗುರು ಪಡೆದು ಹೊಸ ವರುಷದ ಹೊಸ್ತಿಲಲಿ ಕರಾವಳಿಯ ಉದ್ದಗಲಕ್ಕೂ ಹಬ್ಬುವ ಹಬ್ಬ ಉತ್ಸವಗಳು ತುಳುನಾಡ ಶ್ರೀಮಂತ ಸಂಸ್ಕೃತಿಯ ಪ್ರತಿಬಿಂಬ. ಪತ್ತನಾಜೆಯಿಂದ ನಾಗರ ಪಂಚಮಿಯವರೆಗೆ ಜಾತ್ರೆಗಳಿಗೆ ವಿರಾಮ. ನಾಗರ ಪಂಚಮಿ ಕಳೆಯುತ್ತಲೇ ತುಳುನಾಡ ಹಬ್ಬಗಳಿಗೆ ಬಿಡುವಿಲ್ಲ. ದೀಪಾವಳಿ ಕಳೆದು ಲಕ್ಷದೀಪೋತ್ಸವಗಳು ಮುಗಿದ ಬಳಿಕ ಪತ್ತನಾಜೆವರೆಗೂ ಸಂಭ್ರಮವೋ ಸಂಭ್ರಮ. ಜಾತ್ರೆಗಳಿಗೆ ಧರ್ಮದ ಲೇಪವಿದ್ದರೂ, ಇದು ಒಗ್ಗಟ್ಟಿನ ಭೇದ-ಭಾವ ಮೆಟ್ಟಿನಿಲ್ಲುವ ಒಗ್ಗಟ್ಟಿನ ಪ್ರತೀಕಗಳು. 
ಜಾತ್ರೆ ಉತ್ಸವಗಳಲ್ಲಿ ಸಂತೆಗಳಿಲ್ಲದಿದ್ದರೆ ಹಬ್ಬದ ವಾತಾವರಣ ಸೃಷ್ಠಿಯಾಗುವುದಿಲ್ಲ. ಜಾತ್ರೆಗಳಿಗೆ ಸಂತೆಯೇ ಮೆರುಗು. ಪುಟ್ಟ ಮಕ್ಕಳಿನಿಂದ ಹಿಡಿದು ದೊಡ್ಡವರೂ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಲು ಸಂತೆಯೆಡೆ ಗುಂಪು ಗುಂಪಾಗಿ ದಪುಗಾಲು ಹಾಕಿ, ಚೌಕಾಸಿಗಾಗಿ ಮಾತಿಗಿಳಿದು ಅಂತೂ ಅಂದು ಕೊಂಡ ಬೆಲೆಗೆ ವಸ್ತುಗಳನ್ನು ಕೊಂಡುಕೊಂಡು ಪಡುವ ಆ ಖುಷಿ ಧನ್ಯತಾ ಭಾವ ಕಾಣ ಸಿಗುವುದು ಸಂತೆಯಲ್ಲಿ ಮಾತ್ರ. ಆ ಅನುಭವ ವರ್ಣಿಸಲಸಾಧ್ಯ.
ಮಕ್ಕಳು ಆಟಿಕೆಗಳ ಅಂಗಡಿಗಳೆದುರು ಅದು ಬೇಕು ಇದು ಬೇಕು ಎಲ್ಲವೂ ಬೇಕು...ಎಂಬ ಹಠ, ಪರ್ಸ್ನಲ್ಲಿ ಹಣ ಎಷ್ಟಿದೆ ಎಂದು ಗುಟ್ಟು ಬಲ್ಲ ತಾಯ್ತಂದೆ ಮಕ್ಕಳನ್ನು ಸಮಾಧಾನ ಪಡಿಸುವುದು.. ಮಕ್ಕಳು ಅಮ್ಮನೊಂದಿಗಿನ ಜಗಳವಾಡಿ ಚೀರಾಡುವುದು ಇಂತಹ ಗದ್ದಲ ಸಂತೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಸಂತೆ ಎಂದರೆ ಅಲ್ಲಿ ಎಲ್ಲವೂ ಸಿಗುತ್ತದೆ ಎಂಬ ನಂಬಿಕೆ ಗ್ರಾಮೀಣ ಜನರದ್ದು. ಇಲ್ಲಿ ಎಲ್ಲರಿಗೂ ಮುಕ್ತ ಸ್ವಾಗತ. ಮಕ್ಕಳಿಗೆ ಅಟಿಕೆಗಳು. ಸ್ತ್ರೀಯರಿಗೆ ಅಲಂಕಾರಿಕ ವಸ್ತುಗಳು, ಜ್ಯೂಸ್, ತಿನಿಸುಗಳು ಐಸ್ಕ್ರೀಮ್ಗಳು, ಪಡ್ಡೆ ಹುಡುಗರಿಗೆ ನೆಚ್ಚಿನ ತಾರೆಯರ ಫೋಟೋಗಳು, ವೃದ್ಧರಿಗೆ ಪುರಾಣದ ಪುಸ್ತಕಗಳು. ಹೀಗೆ ಆಯಾಯ ವಯಸ್ಸಿಗೆ ತಕ್ಕವುಗಳು ಸಂತೆಯಲ್ಲಿ ಲಭ್ಯ ಹಾಗಾಗಿ ಸಂತೆಗೆ ಹೋಗುವುದು ಎಂದರೆ ಎಲ್ಲರಿಗೂ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗಂತೂ ಊರಿನ ಜಾತ್ರೆಯ ಸಂತೆ ವರ್ಷದ ಶಾಪಿಂಗ್ ನ ಪರ್ವ ದಿನ
ಜಾತ್ರೆಯಲ್ಲಿ ಮಕ್ಕಳ ಅಟಿಕೆಗಳಿಗೆ, ಸ್ತ್ರೀ ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ. ಆ ವಸ್ತುಗಳ ಮುಂಗಟ್ಟುಗಳಿಗೆ ಹೆಚ್ಚಿನ ವ್ಯಾಪಾರವಾಗುತ್ತದೆ ಲಾಭಗಳಿಸುವ ವಿಚಾರದಲ್ಲಿ ಆಯಾಯ ಉತ್ಸವ ಜನಸಾಗರದ ಮೇಲೆ ಅವಲಂಬಿತವಾಗಿದೆ. ಒಂದೇ ಬಗೆಗಿನ ವಸ್ತುಗಳ ಅಂಗಡಿ ಮುಂಗಟ್ಟುಗಳು ಎಷ್ಟು ಸಂತೆಯಲ್ಲಿದೆ ಎನ್ನುವುದರ ಮೇಲೆಯೂ ಲಾಭದ ವಿಚಾರ ನಿಲ್ಲುತ್ತದೆ.
ಮಳೆಗಾಲದ ವೇಳೆ ಸಂತೆ ವ್ಯಾಪಾರಿಗಳಿಗೆ ವಿರಾಮ ಆಗ ಕೆಲವು ವ್ಯಾಪಾರಿಗಳು ಕೃಷಿಯಲ್ಲಿ ತೊಡಗಿಸಿಕೊಳ್ಳುವುದೂ ಉಂಟು. ಉತ್ಸವಗಳು ಪ್ರಾರಂಭವಾದ ಬಳಿಕ ಕೃಷಿಗೆ ಕೋಕ್. ಮಳೆಗಾಲ ವೇಳೆಗೆ ನೆನೆಗುದಿಗೆ ಬೀಳುವ ಸಂತೆಯ ಟೆಂಟ್ಗಳು ಹೊಸ ವರುಷದ ವೇಳೆ ಅಲ್ಲಲ್ಲಿ ಗರಿಗೆದರುತ್ತದೆ.
 ಎಲ್ಲೆಲ್ಲಿ ಜಾತ್ರೆಗಳು ಇರುತ್ತವೆ ಎಂಬ ಪಟ್ಟಿ ಈ ವ್ಯಾಪಾರಿಗಳಲ್ಲಿ ಮೊದಲೇ ಸಿದ್ಧ. ಜಾತ್ರೆಗೆ ಒಂದೆರಡು ದಿನ ಮೊದಲೇ ತೆರಳಿ ಮಳಿಗೆಗಳ ಜಾಗದ ಸುಂಕ ಪಾವತಿಸಿ ಸರಕು ಸರಂಜಾಮುಗಳೊಂದಿಗೆ ವ್ಯವಸ್ಥಿತವಾಗಿ ಜೋಡಿಸಿಡುತ್ತಾರೆ
ಸಂತೆಯ ಜನಜಂಗುಳಿ ಆಕರ್ಷಣೆ, ಜನರ ಭರಾಟೆ ತಪ್ಪಿಸಿಕೊಳ್ಳಲು ಯಾರೂ ಇಷ್ಟ ಪಡುವುದಿಲ್ಲ. ಕರಾವಳಿಯಲ್ಲಿ ಸಂತೆಗಳು ರೆಕ್ಕೆ ಬಿಚ್ಚುವ ಕಾಲ. ಜಾತ್ರೆಯ ಸಂತೆ ಸುತ್ತಾಡಿ ಆನಂದ ಪಡಲು ಇದು ಸಕಾಲ. 
-ಚಂದ್ರಶೇಖರ್ ಎಸ್ ಅಂತರ

1 comments:

Post a Comment

Share The Posts

Twitter Delicious Facebook Digg Stumbleupon Favorites More